ಭಗತ್ ಸಿಂಗ್ - 
	ಭಾರತದ ಒಬ್ಬ ಅಗ್ರಗಣ್ಯ ಸ್ವಾತಂತ್ರ್ಯ ಯೋಧ. ಈಗ ಪಾಕಿಸ್ತಾನದಲ್ಲಿರುವ ರೈಲ್‍ಪುರ್ ಜಿಲ್ಲೆಯ ಬಾಂಗಾ ಎಂಬಲ್ಲಿ 1909 ಸೆಪ್ಟಂಬರ್ 28ರಂದು ಜನಿಸಿದ. ತಂದೆ ಕಿಸನ್‍ಸಿಂಗ್, ತಾಯಿ ವಿದ್ಯಾವತೀದೇವಿ. ದೇಶಭಕ್ತ ಸೂಫಿ ಅಂಬಾಪ್ರಸಾದ್ ಈ ಮನೆತನದ ಸ್ನೇಹಿತ. ಭಗತ್ ಸಿಂಗ್ ಬಾಲ್ಯದಲ್ಲಿ ಆರ್ಯಸಮಾಜದ ಪ್ರಭಾವಕ್ಕೆ ಒಳಗಾದ. ಲಾಹೋರಿನ ಡಿ.ಎ.ವಿ. ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಹದಿನಾರನೆಯ ವರ್ಷದಲ್ಲೇ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡ. ಲಾಲಾಲಜಪತರಾಯರಂಥ ನಾಯಕರ ಚಟುವಟಿಕೆಗಳಿಂದ ಪ್ರಭಾವಿತನಾದ. ರಷ್ಯನ್ ಕ್ರಾಂತಿ ಮತ್ತು ಮಾಕ್ರ್ಸ್‍ವಾದಗಳಿಗೆ ಮಾರುಹೋದ. ಮುಂದೆ ಲಾಲಾಲಜಪತರಾಯ್ ಆರಂಭಿಸಿದ್ದ ರಾಷ್ಟ್ರೀಯ ಕಾಲೇಜನ್ನು ಸೇರಿದ. ಸುಖದೇವ್ ಮತ್ತು ಭಗವತೀಚರಣ್ ಜೊತೆ ಸೇರಿ ಜನತಾ ಸೇವಾ ಸಮಾಜ ಎಂಬ ಸಂಸ್ಥೆ ಆರಂಭಿಸಿ ವಿದ್ಯಾರ್ಥಿಗಳ ಸಂಘಟನೆ ಹಾಗೂ ದೇಶಭಕ್ತಿ ಅಧ್ಯಯನ ಆರಂಭಿಸಿದ. ಕಾನ್‍ಪುರದಲ್ಲಿ ನಡೆದ ಕ್ರಾಂತಿಕಾರಿಗಳ ಗುಪ್ತಸಭೆಯಲ್ಲಿ (1926) ಇವನನ್ನು ವಿಜಯಕುಮಾರ ಸಿಂಗ್‍ನೊಂದಿಗೆ ಸಂಘಟಕನಾಗಿ ನೇಮಿಸಲಾಯಿತು.

	1926 ಅಕ್ಟೋಬರಿನಲ್ಲಿ ದೆಹಲಿಯಲ್ಲಿ ದಸರಾ ಕಾಲದಲ್ಲಿ ರಾಮಲೀಲಾ ಉತ್ಸವ ನಡೆದಾಗ ಯಾರೋ ಬಾಂಬ್ ಎಸೆದ ಪ್ರಕರಣದಲ್ಲಿ ಯಾವ ಸಂಬಂಧವೂ ಇಲ್ಲದ ಭಗತ್‍ಸಿಂಗನನ್ನು ಬಂಧಿಸಿ ಬಾಲಾಪರಾಧಿಗಳ ಜೈಲಿನಲ್ಲಿ ಇಟ್ಟರು. ಆಗ ಅಲ್ಲಿ ಇವನಿಗೆ ಅನೇಕ ಕ್ರಾಂತಿಕಾರಿ ಕೈದಿಗಳ ಪರಿಚಯವಾಯಿತು. ಈ ಪ್ರಕರಣದಲ್ಲಿ ರೂ. 60,000 ಜಾಮೀನಿನ ಮೇಲೆ ಇವನನ್ನು ಬಿಡುಗಡೆ ಮಾಡಿದರು. ಈ ಮುಚ್ಚಳಿಕೆಯ ಸ್ಥಿತಿಯಲ್ಲಿದ್ದಾಗಲೇ ನೌಜವಾನ್ ಭಾರತ್‍ಸಭಾ ಎಂಬ ಸಂಘಟನೆಯನ್ನು ಗುಪ್ತವಾಗಿ ಮಾಡಿದ. ಸೋಹನಸಿಂಗ್ ಜೋಶ್‍ನ ಕೀರ್ತಿ ಎಂಬ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ ಕೆಲಸಮಾಡಿದ. ದೇಶದ ಖ್ಯಾತ ಕ್ರಾಂತಿಕಾರೀ ಗುಪ್ತ ಸಂಘಟನೆಯಾದ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ನಿನ ಸಭೆ ದೆಹಲಿಯಲ್ಲಿ ನಡೆದಾಗ (1928) ಸಂಸ್ಥೆಯ ಹೆಸರನ್ನು ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂದು ಬದಲಾಯಿಸಬೇಕೆಂದು ವಾದಿಸಿ ಜಯಗಳಿಸಿದ. ಆಗ ಚಂದ್ರಶೇಖರ ಆಝಾದನ ನೇತೃತ್ವದಲ್ಲಿ ರೂಪಿತವಾದ ಸಂಸ್ಥೆಯ ಸೇನಾವಿಭಾಗದಲ್ಲಿ ಭಗತ್ ಸಿಂಗ್ ಒಬ್ಬ ಪ್ರಮುಖನಾಯಕ ಮತ್ತು ಸಂಘಟಕನಾದ. ಎಲ್ಲ ಕ್ರ್ರಾಂತಿಕಾರಿಗಳೂ ಪರಿಣಾಮಕಾರಿಯಾಗಿ ಮತ್ತು ನಿರ್ಭಯವಾಗಿ ಕೆಲಸಮಾಡಲು ತಮ್ಮ ಮನೆಗಳನ್ನು ತ್ಯಜಿಸಬೇಕೆಂಬ ನಿರ್ಧಾರದಂತೆ, ಎಲ್ಲ ಕಾರ್ಯಕರ್ತರೂ ಸಂಘಟನೆಯ ಕೇಂದ್ರ ಝಾನ್ಸಿಯಲ್ಲಿ ಮತ್ತು ಮುಂದೆ ಆಗ್ರಾದಲ್ಲಿ ಇರತೊಡಗಿದರು. ತೀರ ಆರ್ಥಿಕ ತೊಂದರೆಯಲ್ಲಿ ಇದ್ದ ಈ ತರಣರು ಬಡತನದಿಂದ ಸರಿಯಾಗಿ ಅನ್ನಾಹಾರವಿಲ್ಲದೆ ತೀರ ಕಷ್ಟದ ಜೀವನ ನಡೆಸಬೇಕಾಯಿತು. ಅರ್ಥಶಾಸ್ತ್ರ ಹಾಗೂ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ್ದ, ಮಾಕ್ರ್ಸ್‍ನ ಹೇಳಿಕೆಗಳನ್ನು ಕಂಠಗತಮಾಡಿಕೊಂಡಿದ್ದ ಭಗತ್‍ಸಿಂಗ್ ಸಂಘಟನೆಯ ಮಾರ್ಗದರ್ಶಕರಲ್ಲಿ ಒಬ್ಬನಾದ.

	ಸೈಮನ್ ಕಮಿಷನ್ ಬಂದಾಗ ಲಾಹೋರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸರ ಲಾಠಿ ಏಟಿಗೆ ತುತ್ತಾಗಿ ಲಾಲಾಲಜಪತ್‍ರಾಯ್ ಮರಣ ಹೊಂದಿದರು. ಅವರನ್ನು ಥಳಿಸಿದ ಸ್ಕಾಟ್ ಎಂಬ ಅಧಿಕಾರಿಯನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದು ನಿರ್ಣಯಿಸಿ, ಭಗತ್‍ಸಿಂಗ್ ಮತ್ತು ರಾಜಗುರು ಇವರು ಜೆ.ಪಿ. ಸಾಂಡರ್ಸ್ ಎಂಬ ಅಧಿಕಾರಿಯನ್ನು ಕೊಂದರು. ಕೊಲೆಯ ಅನಂತರ ತಲೆತಪ್ಪಿಸಿಕೊಂಡಿದ್ದ ಭಗತ್‍ಸಿಂಗ್ ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯ ಆಡಳಿತದ ಬಗ್ಗೆ ಪ್ರಪಂಚದ ಕಣ್ತೆರೆಸಬೇಕೆಂಬ ಉದ್ದೇಶದಿಂದ, ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ ಬಟುಕೇಶ್ವರ ದತ್ತನೊಂದಿಗೆ ಬಾಂಬನ್ನೆಸೆದು ಬಂಧಿತನಾದ (1929). ಅಲ್ಲಿಂದ ತಪ್ಪಿಸಿಕೊಳ್ಳುವ ಅವಕಾಶ ಇದ್ದರೂ ತಪ್ಪಿಸಿಕೊಳ್ಳಲಿಲ್ಲ. ಮುಂದೆ ಜೈಲಿನಲ್ಲಿದಾಗ, ರಾಜಕೀಯ ಕೈದಿಗಳ ಸ್ಥಾನಮಾನಗಳ ಸುಧಾರಣೆ ಆಗಬೇಕೆಂಬುದಾಗಿ 80 ದಿನಗಳ ದೀರ್ಘಕಾಲ ಉಪವಾಸ ಕೈಕೊಂಡ. ವಿವಿಧ ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಂಬಂಧಿಸಿ ವಿಚಾರಣೆಯಾಗಿ, ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಈ ಮೂರು ಮಂದಿಗೂ ಮರಣದಂಡನೆ ವಿಧಿಸಲಾಯಿತು. 1931 ಮಾರ್ಚ್ 23ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್‍ನನ್ನು ಗಲ್ಲಿಗೇರಿಸಲಾಯಿತು. ಬಾಂಬ್ ಎಸೆದಾಗ, ಜೈಲಿನಲ್ಲಿ ಇದ್ದಾಗ ಹಾಗೂ ವಿಚಾರಣೆ ನಡೆದಾಗ ನಾನಾ ರೀತಿಯಲ್ಲಿ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಪ್ರತಿಭಟನೆ ಪ್ರಕಟಿಸಿದ ಭಗತ್ ಸಿಂಗ್ ಮತ್ತು ಜೊತೆಗಾರರು ಹೆಚ್ಚು ಜನ ಜಾಗೃತಿಗೆ ಕಾರಣಾರಾದರು. ಭಗತ್ ಸಿಂಗನಿಗೆ ಶಿಕ್ಷೆ ವಿಧಿಸಿದಾಗ ಮತ್ತು ಗಲ್ಲಿಗೇರಿಸಿದಾಗಲೂ ದೇಶದ ನಾನಾಕಡೆ ಪ್ರತಿಭಟನೆ. ಹರತಾಳ ನಡೆದವು. ಭಾರತದ ಯುವಕರಿಗೆ ಸ್ಫೂರ್ತಿನೀಡಿದ ಭಗತ್ ಸಿಂಗ್ ಹುತಾತ್ಮನಾದ.
(ಎಸ್.ಎನ್.ಕೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ